ಪಚ್ಚೆ -
	ಉಜ್ಜ್ವಲ ಹಸಿರು ಬಣದ ಪ್ರಶಸ್ತಶಿಲೆ (ಎಮರಾಲ್ಡ್).  ಷಡ್ಭುಜಾಕೃತಿಯಲ್ಲಿ ಸ್ಫಟಿಕೀಕರಿಸುತ್ತದೆ.  ಖನಿಜದಲ್ಲಿ ವ್ಯತ್ಯಾಸವಾಗುವ ಪರಿಮಾಣದ ಕ್ರೋಮಿಯಮ್ ಆಕ್ಸೈಡಿನ ಇರುವಿಕೆಯಿಂದಾಗಿ ಇದಕ್ಕೆ ಹಸಿರು ಬಣ್ಣ ಬಂದಿದೆ.  ನವರತ್ನಗಳ ಪೈಕಿ ಇದೂ ಒಂದು.  ಎಳೆಹಸಿರು, ಹಳದಿ, ಬಿಳುಪು ಈ ವರ್ಣ ಛಾಯೆಗಳಿರುವ ಪಾರದರ್ಶಕ ರತ್ನವಿಶೇಷವಾದ ಬೆರಿಲ್ ಜಾತಿಗೆ ಸೇರಿದ ಖನಿಜ. ರಾಸಾಯನಿಕ ಸೂತ್ರ Al2 ( Be3 Si6 O18). ಮ್ಹೋಮಾನಕದಲ್ಲಿ ಕಾಠಿಣ್ಯಾಂಕ 7.5 ; ಸಾಪೇಕ್ಷ ಸಾಂದ್ರತೆ 2.67-2.85 : ರಿಫ್ರೇಕ್ಷಣಾಂಕ 1.565 - 1.993.  ರತ್ನಪಡಿ ವ್ಯಾಪಾರದಲ್ಲಿ ಪಚ್ಚೆಗೂ ಇದನ್ನು ಹೋಲುವ ಹಸಿರು ಬಣ್ಣದ  ಬೆರಿಲ್ ರತ್ನಕ್ಕೂ ಇರುವ ವ್ಯತ್ಯಾಸ ಬಲುಕಡಿಮೆ.  ಅಂತರ್ವೇಶ (ಇನ್‍ಕ್ಲೂಷನ್), ವಿಭಂಗ (ಫ್ರ್ಯಾಕ್ಚರ್) ಅಥವಾ ಆರಂಭದೆಶೆಯ ವಿಭಂಗಗಳು (ಇನ್‍ಸಿಪಿಯಂಟ್ ಫ್ರ್ಯಾಕ್ಚರ್ಸ್) ಇವು ಖನಿಜದಲ್ಲಿ ತಲೆದೋರುವುದರಿಂದ ಪಚ್ಚೆಕಲ್ಲುಗಳು ಇತರ ಬೆರಿಲ್ ಪ್ರಭೇದಗಳಿಗಿಂತಲೂ ಅಧಿಕ ಬಿಧುರಗುಣವುಳ್ಳವು.

	ಬಹುತೇಕ ಬೆರಿಲ್ ಪ್ರಭೇದಗಳಿಗೆ ಪೆಗ್ಮಾಟಿಟಿಕ್ ಶಿಲೆಗಳು ಆಕರ. ಪಚ್ಚೆ ಆದರೋ ಶಿಷ್ಟೋಸ್ ಶಿಲೆಗಳಲ್ಲಿಯ ಘಟಕವಾಗಿ, ಅಲ್ಲದೆ ಅಶುದ್ಧ ಸುಣ್ಣಕಲ್ಲಿನ ಕ್ಯಾಲ್ಸೈಟ್ ಸಿರಗಳಲ್ಲಿ ಕೂಡ, ದೊರೆಯುತ್ತದೆ.  ಪ್ರಪಂಚದಲ್ಲೇ ಪಚ್ಚೆಯ ಅತ್ಯಂತ ದೊಡ್ಡ ಆಕರ ಕೊಲಂಬಿಯದಲ್ಲಿದೆ.  ಇದು ಪ್ರಧಾನವಾಗಿ ಕ್ಯಾಲ್ಸೆಟ್‍ಸಿರ ಬಗೆಯದು.  ಸರ್ಕಾರದ ಸ್ವಾಮ್ಯದಲ್ಲಿರುವ ಮ್ಯೂಜೋ ಗಣಿಗಳು, ಚಿನ್‍ವರ್ ಗಣಿಗಳು ಮತ್ತು ಸೊಮಾಂಡಕೋ ಗಣಿಗಳು ಇಲ್ಲಿಯ ಪಚ್ಚೆ ಗಣಿಗಳು.  ಪ್ರಪಂಚದ ಅತ್ಯುತ್ಕøಷ್ಟ ಪಚ್ಚೆಗಳು ಲಭ್ಯವಾಗುವುದು ಮೂಜೋ ಗಣಿಗಳಿಂದಲೇ. ಪಚ್ಚೆ ಲಭ್ಯವಾಗುವ ಇತರ ಪ್ರದೇಶಗಳೆಂದರೆ ಯೂರಲ್ ಪರ್ವತಗಳು, ಭಾರತ, ದಕ್ಷಿಣ ಆಫ್ರಿಕ ಮತ್ತು ರೊಡೀಷಿಯ.

	ಖನಿಜ ರೂಪದಲ್ಲಿ ದೊರೆಯುವ ಶಿಲೆಯನ್ನು ಕಡೆದು, ಸಾಣೆಹಿಡಿದು ಪಟ್ಟೆಗಳು ಬರುವಂತೆ ಮಾಡಿ ಮೆರುಗು ನೀಡಿ ಪ್ರಜ್ವಲಿಸುವಂತೆ ಮಾಡಿ ನಯನಾಕರ್ಷಕವಾಗುವಂತೆ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದರಿಂದಲೇ ಪಚ್ಚೆಗೆ ಅಧಿಕ ಬೆಲೆ ಇರುವುದಾಗಿದೆ.  ಕಂಠಾಭರಣ, ಕೈಯುಂಗುರ, ಓಲೆ ಮುಂತಾದ ಸ್ವರ್ಣಾಭರಣಗಳಿಗೆ ಪಚ್ಚೆಕಲ್ಲನ್ನು ಅಳವಡಿಸುವುದು ವಾಡಿಕೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ